ಫ್ಯಾಸಿಸಮ್ -
	ಇದೊಂದು ರಾಜಕೀಯ ಧೋರಣೆ, ಸಾಮೂಹಿಕ ಚಳವಳಿ. ರಾಷ್ಟ್ರ, ರಾಜ್ಯ ಅಥವಾ ಜನಾಂಗಕ್ಕೆ ವಿಶೇಷ ಪ್ರಾಮುಖ್ಯ ನೀಡಿ, ಅದಕ್ಕೆ ಅನುಗುಣವಾಗಿ ಇತಿಹಾಸ ಮತ್ತು ಜನಜೀವನವನ್ನು ರೂಪಿಸಬೇಕೆಂಬುದು ಇದರ ಧ್ಯೇಯ. ಇದು ವ್ಯಕ್ತಿಗಳನ್ನೂ ವ್ಯಕ್ತಿಯ ಹಕ್ಕುಗಳನ್ನೂ ಇಡೀ ಮಾನವತೆಯನ್ನೂ ಗೌಣವೆಂದು ಪರಿಗಣಿಸಿ ರಾಪ್ಟ್ರೀಯತೆಯನ್ನೇ ಉಚ್ಚ ಸ್ಥಾನದಲ್ಲಿಟ್ಟು ಅದಕ್ಕೆ ಪೂಜೆ ಸಲ್ಲಿಸುತ್ತದೆ. ಅಲ್ಪಸಂಖ್ಯಾತರ ಗುಂಪೊಂದು ಅಧಿಕಾರಸ್ಥಾನವನ್ನು ಆಕ್ರಮಿಸಿಕೊಂಡು ಸಮಗ್ರವಾಗಿ ಸರ್ವಾಧಿಕಾರವನ್ನು ಸ್ಥಾಪಿಸುವುದು ಇದರ ವಿಧಾನ. ಯೂರೋಪಿನಲ್ಲಿ ಪ್ರಬಲವಾದ ಮಾಕ್ರ್ಸ್‍ವಾದಿ ಚಳವಳಿಗೆ ಇದು ಪ್ರತಿಕ್ರಿಯೆ. ಕಮ್ಯೂನಿಸಮ್ಮಿನ ಮಾದರಿಯನ್ನೇ ಅನುಸರಿಸಿ ಇದು ಪ್ರಭಾವ ಗಳಿಸಿಕೊಳ್ಳುತ್ತದೆ. ಸಮಾಜವಾದಿ ಆಂದೋಲನದ ಎದುರು ಕುಸಿಯುತ್ತಿರುವ ಬಂಡವಾಳವಾದದ ಕೊನೆಯ ಹೋರಾಟವಿದು ಎಂದೂ ಇದನ್ನು ಬಣ್ಣಿಸಲಾಗಿದೆ.

	ಚಾರಿತ್ರಿಕ ವಿವೇಚನೆ : ಒಂದನೆಯ ಮಹಾಯುದ್ಧದ ಭೀಕರ ಅನುಭವದ ಅನಂತರ ಯೂರೋಪಿನ ದೇಶಗಳಲ್ಲಿ ಶಾಂತಿ, ಸಮೃದ್ಧಿ ಮತ್ತು ಪ್ರಜಾತಂತ್ರದ ತಳಹದಿಯ ಮೇಲೆ ನವಯುಗವನ್ನು ಸ್ಥಾಪಿಸುವ ಹೆಬ್ಬಯಕೆ ದೃಢನಿಶ್ಚಯಗಳು ಮೂಡಿದ್ದುವು. ಆದರೆ ಈ ಪುನರ್ಘಟನೆಯ ಹೊಣೆಯನ್ನು ಹೊತ್ತಿದ್ದ ರಾಜಕೀಯ ಮುಖಂಡರು ತಾವು ಎದುರಿಸಬೇಕಾಗಿದ್ದ ಮಹಾ ಐತಿಹಾಸಿಕ ಸನ್ನಿವೇಶದಲ್ಲಿ ರಾಜಕಾರ್ಯಪಟುತ್ವವನ್ನು ಬದಿಗಿರಿಸಿ ಸಂಕುಚಿತ ರಾಷ್ಟ್ರೀಯತೆ ಮತ್ತು ರೂಢಿಗತ ಕೂಟನೀತಿಯನ್ನೇ ಅನುಸರಿಸಿದರು. ಇದರ ಫಲವಾಗಿ ವರ್ಸೇಲ್ಸ್ ಕೌಲಿನಲ್ಲಿ ಆಶಿಸಲಾಗಿದ್ದ ನವಯುಗದ ನಾಂದಿಯಾಗದೆ ಅದು ದ್ವಿತೀಯ ಮಹಾಯುದ್ಧದ ವಿಷ ಬೀಜವಾಗಿ ಪರಿಣಮಿಸಿತು.

	ಪರಾಜಿತ ರಾಷ್ಟ್ರಗಳ ಅಭಿಮಾನಕ್ಕೂ ಆರ್ಥಿಕ ಮತ್ತು ರಾಜನೈತಿಕ ಭದ್ರತೆಗಳಿಗೂ ವರ್ಸೇಲ್ಸ್ ಕೌಲಿನಿಂದ ತೀವ್ರ ಧಕ್ಕೆಯುಂಟಾಗಿತ್ತು. ಇದರ ಪರಿಣಾಮಗಳು ಇತರ ರಾಷ್ಟ್ರಗಳ ಮೇಲೆ ಆಗದೆ ಇರಲಿಲ್ಲ. ಈ ಸಂದರ್ಭದಲ್ಲಿ ಇನ್ನೊಂದು ಐತಿಹಾಸಿಕ ಘಟನೆ ಗಮನಾರ್ಹವಾದುದು. ಹಲವಾರು ಐರೋಪ್ಯ ದೇಶಗಳಲ್ಲಿ ಕಮ್ಯೂನಿಸ್ಟ್ ಚಳವಳಿ ಪ್ರಬಲವಾಗುತ್ತಿತ್ತು. 1917ರ ರಷ್ಯದ ಕ್ರಾಂತಿಯಿಂದ ಇತರ ರಾಷ್ಟ್ರಗಳ ಕಮ್ಯೂನಿಸ್ಟ್ ಪಕ್ಷಗಳಿಗೆ ನೈತಿಕ ಬಲ ದೊರೆತಿತ್ತು. ಜರ್ಮನಿ, ಇಟಲಿ ಮುಂತಾದ ದೇಶಗಳಲ್ಲಿ ಕಮ್ಯೂನಿಸ್ಟರು ಅಧಿಕಾರವನ್ನು ವಶಪಡಿಸಿಕೊಳ್ಳಲು ಬಲವಾದ ಸಿದ್ಧತೆಗಳನ್ನು ನಡೆಸಿದ್ದರು. ಅಧಿಕಾರದಲ್ಲಿದ್ದ ಸಾಮಾಜಿಕ, ಆರ್ಥಿಕ ವ್ಯವಸ್ಥೆಗೆ ಒದಗಿದ್ದ ಗಂಡಾಂತರವೇ ಅವರ ತೀವ್ರವಾದ ಪ್ರತಿಕ್ರಿಯೆ ಮತ್ತು ಪ್ರತಿಭಟನೆಗೆ ಕಾರಣವಾಯಿತೆಂದು ಹೇಳಬಹುದು. ಈ ಸಂಘರ್ಷಣೆಗಳು ಬರಬರುತ್ತ ಬೃಹದಾಕಾರ ತಳೆದುವು. ಪಾಶ್ಚಾತ್ಯ ದೇಶಗಳ ಮೌಲ್ಯಗಳೂ ಅವುಗಳ ತಳಹದಿಗಳೂ ಸಡಿಲಗೊಂಡುವೆನಿಸಿತು. ಇಂಥ ಸನ್ನಿವೇಶದಲ್ಲಿ ಈ ಪ್ರವೃತ್ತಿಗೆ ಪ್ರತಿಕ್ರಿಯೆಯಾಗಿ ಫ್ಯಾಸಿಸಮ್ ಹುಟ್ಟಿಕೊಂಡಿತೆನ್ನಬಹುದು.

	ಫ್ಯಾಸಿಸಮ್ ಎಂಬ ಪದವನ್ನು ಮೊಟ್ಟಮೊದಲು ಉಪಯೋಗಿಸಿದವನು ಇಟಲಿಯ ಬೆನಿಟೊ ಮುಸೊಲೀನಿ, 1919ರಲ್ಲಿ. ಅನಂತರ ಇದರ ಪ್ರಭಾವ ಇತರ ದೇಶಗಳಿಗೂ ಹಬ್ಬಿತು. ಜಪಾನ್, ಅರ್ಜೆಂಟೇನ, ಬ್ರೆಜಿûಲ್, ದಕ್ಷಿಣ ಆಫ್ರಿಕ ಮುಂತಾದ ದೇಶಗಳಲ್ಲೂ ಇದು ಪ್ರಚಾರವಾಯಿತು. ಇಟಲಿ ಜರ್ಮನಿಗಳು ಫ್ಯಾಸಿಸ್ಟ್ ಹಾದಿ ಹಿಡಿದುವು. ಸ್ಪೇನಿನಲ್ಲೂ ಪೋರ್ಚುಗಲ್ಲಿನಲ್ಲೂ ಫ್ಯಾಸಿಸ್ಟ್ ಆಡಳಿತಗಳು ಬಂದುವು. ಒಂದು ಕೊಡಲಿಯೂ ಇರುವ ಕೊರಡುಗಳ ಕಂತೆ ಅಥವಾ ಕಟ್ಟು ಎಂಬ ಅರ್ಥ ಬರುವ ಫ್ಯಾಸಿಸ್ ಎಂಬ ಲ್ಯಾಟಿನ್ ಪದದಿಂದ ವ್ಯುತ್ಪತ್ತಿ ಹೊಂದಿದ ಫ್ಯಾಸಿಯೋ ಎಂಬ ಇಟಾಲಿಯನ್ ಪದವೇ ಫ್ಯಾಸಿಸಮ್ ಎಂಬುದಕ್ಕೆ ಮೂಲ. ಒಬ್ಬ ವ್ಯಕ್ತಿಯ ಇಚ್ಛೆಗೆ ವಿಧೇಯರಾಗಿ ಹಲವರು ಒಂದಾಗಿ ಚಲಾಯಿಸುವ ಅಧಿಕಾರದ ಸಂಕೇತವಿದು. ಎಲ್ಲ ಅಧಿಕಾರವೂ ಉಗಮಿಸುವುದು ರಾಜ್ಯದಲ್ಲಿ ಎಂಬುದನ್ನು ಇದು ಸೂಚಿಸುತ್ತದೆ. ರೋಮನ್ ಇತಿಹಾಸದಲ್ಲಿ ಈ ಕಟ್ಟು ಅಧಿಕಾರ ಮತ್ತು ಗೌರವದ ಪ್ರತೀಕವಾಗಿತ್ತು.

	ಫ್ಯಾಸಿಸಮ್ಮಿನ ಇತಿಹಾಸ ಬಹಳ ಮಟ್ಟಿಗೆ ಮುಸೊಲೀನಿಯ ಜೀವನ ಚರಿತ್ರೆಯೆಂದೇ ಹೇಳಬಹುದು. ಮುಸೊಲೀನಿ (1883-1945) ಇಟಲಿಯ ಉತ್ತರ ಮಧ್ಯ ಭಾಗದಲ್ಲಿಯ ಒಬ್ಬ ಕಮ್ಮಾರನ ಮಗ. ಅವನ ತಂದೆ ಸಮಾಜವಾದಿ ವಿಚಾರಧಾರೆಯ ಪ್ರಭಾವಕ್ಕೆ ಒಳಗಾಗಿದ್ದ. ಮುಸೊಲೀನಿಯೂ ಇದರಿಂದ ಪ್ರಭಾವಿತನಾದ ಮೊದಲು ಉಗ್ರಗಾಮಿ ಸಮಾಜವಾದಿಯಾಗಿದ್ದ ಅವನು ಅನಂತರ ಜರ್ಮನ್ ತತ್ತ್ವಜ್ಞಾನಿ ನೀಷೆಯ ದರ್ಶನದ ಪ್ರಭಾವಕ್ಕೆ ಒಳಗಾದ. ಇಟಲಿಯ ಸೊರೆಲನ ರಾಜಕೀಯ ವಿಚಾರಧಾರೆಯನ್ನೂ ಮೆಚ್ಚಿಕೊಂಡ. ನೀಷೆಯ ಕಲ್ಪನೆಯ ಪ್ರಕಾರ, ಮಹಾಪುರುಷನಾದವನು ಇತಿಹಾಸದ ಕಾರಣಪುರುಷ. ಸಾಮಾನ್ಯರ ಆಚಾರ, ವಿಚಾರ ಹಾಗೂ ವ್ಯವಹಾರಿಕ ರೀತಿನೀತಿಗಳೂ ಕಟ್ಟಳೆಗಳೂ ಅವನಿಗೆ ಅನ್ವಯಿಸುವುದಿಲ್ಲ. ಸೊರೆಲನ ವಿಚಾರಧಾರೆಯೂ ಇದಕ್ಕೆ ಪೋಷಕವಾಗಿತ್ತು. ಒಂದನೆಯ ಮಹಾಯುದ್ಧದ ಆರಂಭದ ವೇಳೆಗೆ ಮುಸೊಲೀನಿ ಉಗ್ರ ರಾಷ್ಟ್ರಾಭಿಮಾನಿಯಾದ. ಇದು ವಾಮಪಕ್ಷದಿಂದ, ಸಾಮ್ಯವಾದದಿಂದ ಅವನಲ್ಲಾದ ಒಂದು ದೊಡ್ಡ ಸೈದ್ಧಾಂತಿಕ ಮಾರ್ಪಾಟು. ಅವನು ಇಟಲಿಯ ರಾಷ್ಟ್ರೀಯ ಹಂಬಲಗಳನ್ನು ಉದ್ವೇಗಪೂರ್ಣ ಭಾಷೆಯಲ್ಲಿ ಅಭಿವ್ಯಕ್ತಿಸಿದ. ಆಸ್ಟ್ರಿಯದಿಂದ ಇಟಲಿಗೆ ಮರಳಿಬರಬೇಕಾದ ಪ್ರದೇಶಗಳ ಬಗ್ಗೆ ಇಟಲಿಯ ರಾಷ್ಟ್ರಾಭಿಮಾನ ಮತ್ತು ರೋಷಗಳನ್ನು ಕೆರಳಿಸುವುದರಲ್ಲಿ ಬಹಳ ಮಟ್ಟಿಗೆ ಸಫಲನಾದ. ಇಟಲಿಯ ರಾಪ್ಟ್ರೀಯ ಭಾಗ್ಯ ವಿಧಾತನಾಗಬೇಕೆಂಬ ಕನಸು ಕಾಣುತ್ತಿದ್ದ ಮುಸೊಲೀನಿಗೆ ಕೊನೆಗೆ ಐತಿಹಾಸಿಕ ಅವಕಾಶಗಳು ಒದಗಿಬಂದುವು.

	ಯುದ್ಧದಲ್ಲಿ ಮುಸೊಲೀನಿ ಸೈನ್ಯವನ್ನು ಸೇರಿ ಯುದ್ಧದ ಕೊನೆಗೆ ಕಾರ್ಪೊರಲ್ ಹುದ್ದೆ ಮುಟ್ಟಿದ. ಯುದ್ಧ ಮುಗಿದ ಮೇಲೆ ಅವನು ರಾಜಕೀಯ ರಂಗವನ್ನು ಪ್ರವೇಶಿಸಿದ. ಅವನು ಫ್ಯಾಸಿಸ್ಟ್ ಪಕ್ಷವನ್ನು ಸ್ಥಾಪಿಸಿದ್ದು 1919ರ ಮಾರ್ಚ್ ತಿಂಗಳಲ್ಲಿ. ಸೈನ್ಯದಿಂದ ಹೊರಬಿದ್ದ ಸೈನಿಕರೇ ಇದರ ಸದಸ್ಯರಲ್ಲಿ ಅಧಿಕ ಸಂಖ್ಯೆಯಲ್ಲಿದ್ದರೂ ಈ ಪಕ್ಷದ ಹೋರಾಟದ ಮನೋವೃತ್ತಿ ಫ್ಯಾಸಿಸಮ್ ಶಬ್ದದ ಉಗಮದಿಂದಲೇ ವ್ಯಕ್ತವಾಗುವುದು. ಇಟಲಿಯ ಗತವೈಭವದಿಂದ ಸ್ಫೂರ್ತಿಗೊಂಡ ಇಟಾಲಿಯನರಿಗೆ ಫ್ಯಾಸಿಯೋ ಎಂಬ ಹೆಸರೇ ಬಹಳ ಆಕರ್ಷಕವಾಗಿತ್ತು. ಪಕ್ಷಕ್ಕೆ ಅಂಥವರನ್ನು ಕೂಡಿಸಿಕೊಂಡು ಹೋರಾಟದ ತಂಡವೊಂದನ್ನು ಮುಸೊಲೀನಿ ಸಂಘಟಿಸಿದ.

	1919ರ ಚುನಾವಣೆಗಳಲ್ಲಿ ಈ ಪಕ್ಷ ಕಟುವಾದ ಸೋಲನ್ನು ಅನುಭವಿಸಿತು. ಮುಖ್ಯವಾಗಿ ಉದಾರವಾದಿ ಜನತಂತ್ರಾತ್ಮಕ ಹಾಗೂ ಸಮಾಜವಾದಿ ಧೋರಣೆಯ ಪಕ್ಷಗಳು ಇದಕ್ಕೆ ಅಡ್ಡಿಯಾಗಿದ್ದುವು. ಯುದ್ಧಾನಂತರದ ಆರ್ಥಿಕ ರಾಜಕೀಯ ಅಸ್ತವ್ಯಸ್ತತೆಯಲ್ಲಿ ವಾಮಪಕ್ಷೀಯ ಶಕ್ತಿಗಳಿಗೆ ಹೆಚ್ಚು ಬೆಂಬಲ ದೊರಕುವುದರಲ್ಲಿ ಸಂದೇಹವಿರಲಿಲ್ಲ. ಚುನಾವಣೆಗಳಲ್ಲಿ ಫ್ಯಾಸಿಸ್ಟ್ ಪಕ್ಷಕ್ಕೆ ಭವಿಷ್ಯವಿಲ್ಲವೆಂಬುದನ್ನು ತಿಳಿದುಕೊಂಡ ಮುಸೊಲಿನಿ ಅಧಿಕಾರವನ್ನು ವಶಪಡಿಸಿಕೊಳ್ಳಲು ಕೂಡಲೇ ಬೇರೆ ತಂತ್ರಗಳನ್ನು ಅನುಸರಿಸಿದ.

	ಒಂದನೆಯ ಮಹಾಯುದ್ಧದಲ್ಲಿ ಇಟಲಿ ಮಿತ್ರ ರಾಷ್ಟ್ರಗಳ ಕಡೆಗೆ ಸೇರಿತ್ತು, ವಿಜಯಶಾಲಿ ಮಿತ್ರ ರಾಷ್ಟ್ರಗಳಿಂದ ಅದು ಬಹಳ ನೆರವನ್ನು ಆಶಿಸಿತ್ತು. ಆದರೆ ವರ್ಸೇಲ್ಸ್ ಕೌಲಿನ ಪ್ರಕಾರ ಆಸ್ಟ್ರಿಯದಿಂದ ಬರಬೇಕಾಗಿದ್ದ ಕೆಲವು ಪ್ರದೇಶಗಳನ್ನು ಬಿಟ್ಟು, ಅದಕ್ಕೆ ವಿಶೇಷ ಲಾಭವಾಗಲಿಲ್ಲ. ಇದರಿಂದ ಇಟಲಿಯ ಉಗ್ರರಾಷ್ಟ್ರೀಯತಾವಾದಿಗಳಿಗೆ ತೀವ್ರ ಅಸಂತೋಷವಾಯಿತು. ಮುಸೊಲೀನಿ ತನ್ನ ಮತ್ತು ತನ್ನ ಪಕ್ಷದ ಲಾಭದ ಸಲುವಾಗಿ ಇವರನ್ನು ಇನ್ನೂ ಉದ್ರೇಕಗೊಳಿಸಿದ. ಜನಸಾಮಾನ್ಯರಲ್ಲಿ ಅಸಂತೋಷಕ್ಕೆ ಇನ್ನೊಂದು ಮುಖ್ಯ ಕಾರಣವಿತ್ತು. ಯುದ್ಧಾನಂತರ ಇಟಲಿಯ ಆರ್ಥಿಕ ಪರಿಸ್ಥಿತಿ ಬಹಳ ಕೆಟ್ಟಿತ್ತು. ಇಟಲಿಯ ಉತ್ಪಾದನ ಸಾಮಥ್ರ್ಯ ಶಿಥಿಲವಾಗಿತ್ತು. ನಿರುದ್ಯೋಗ ಸಮಸ್ಯೆ ಕರಾಳ ಸ್ವರೂಪವನ್ನು ತಾಳಿತ್ತು. ಉದಾರವಾದಿ ಜನತಂತ್ರಾತ್ಮಕ ಪಕ್ಷಗಳ ಆಡಳಿತ ಈ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಅಸಮರ್ಥವಾಗಿತ್ತು. ಜನಸಾಮಾನ್ಯರಲ್ಲಿ ಪ್ರಜಾತಂತ್ರದ ಬಗ್ಗೆ ಬೇಸರ ಮತ್ತು ದ್ವೇಷದ ಭಾವನೆಗಳು ಮನೆಮಾಡಿದ್ದುವು. ಈ ಪರಿಸ್ಥಿತಿ ವಾಮಪಕ್ಷೀಯ ಸಮಾಜವಾದಿಗಳಿಗೆ ಬಹಳ ಅನುಕೂಲವಾಗಿತ್ತು. ಆದರೆ ಸಾಮಾಜಿಕ ಮತ್ತು ಆರ್ಥಿಕ ವಲಯಗಳಲ್ಲಿ ಈ ಬಗೆಯ ಮುನ್ನಡೆಗಳನ್ನು ತಡೆಹಿಡಿಯಲು ಕಟಿಬದ್ಧವಾಗಿದ್ದವು. ಮುಸೊಲೀನಿ ಪ್ರಜಾತಂತ್ರದ ಬಗ್ಗೆ ಇರುವ ಜುಗುಪ್ಸೆಯ ದುರುಪಯೋಗ ಪಡೆದುಕೊಂಡನಲ್ಲದೆ ಈ ವಲಯಗಳಿಂದ ಬೆಂಬಲವನ್ನು ಪಡೆಯುವುದರಲ್ಲಿ ಸಫಲನಾದ. ಅವರಿಗೆ ಮುಸೊಲೀನಿ ಮತ್ತು ಫ್ಯಾಸಿಸಮ್ ಬಿಟ್ಟು ಬೇರೆ ಮಾರ್ಗವಿರಲಿಲ್ಲ. ಸಮಾಜವಾದಿಗಳನ್ನು ಹತ್ತಿಕ್ಕಲು ಮುಸೊಲೀನಿ ಸಿದ್ಧನಾದ.

	ಮುಸೊಲೀನಿ ಅಧಿಕಾರಕ್ಕೆ ಬಂದದ್ದು 1922ರಲ್ಲಿ. ಆದರೆ ಅದಕ್ಕಿಂತ ಮುಂಚೆಯೇ ಫ್ಯಾಸಿಸ್ಟ್ ಸೇವಾದಳದ ತಂಡಗಳು ಸಮಾಜವಾದಿ ಚಳವಳಿಯನ್ನು ಹತ್ತಿಕ್ಕಲು ಮುಖ್ಯ ಪಾತ್ರವಹಿಸಿದ್ದುವು. ಇಟಲಿಯ ಆರ್ಥಿಕ ಮತ್ತು ರಾಜಕೀಯ ಅಸ್ತವ್ಯಸ್ತತೆಯನ್ನು ಹೋಗಲಾಡಿಸಲು ಮುಸೊಲೀನಿಗೆ ಮಾತ್ರ ಸಾಧ್ಯ ಎಂಬ ಭಾವನೆ ಹಲವಾರು ಜನರಲ್ಲಿ ಆಗಲೇ ಮೂಡಿತ್ತು. 1922ರ ಅಕ್ಟೋಬರ್ ತಿಂಗಳಲ್ಲಿ ಇಟಲಿಯ ಸಂಸದೀಯ ಪದ್ಧತಿಯ ಸರ್ಕಾರಕ್ಕೆ ದೊಡ್ಡ ರಾಜಕೀಯ ಬಿಕ್ಕಟ್ಟು ಸಂಭವಿಸಿದಾಗ ಮುಸೋಲಿನಿ ಅದನ್ನು ನಿವಾರಿಸಲು ಒಂದು ಪರಿಣಾಮಕಾರಿ ತಂತ್ರ ಹೂಡಿದ. ಇದು ರೋಮಿನ ಮೇಲಿನ ದಾಳಿಯೆಂದು ಹೆಸರಾಗಿದೆ. ಮುಸೊಲೀನಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಬೇಕೆಂದು ಇಟಲಿಯ ದೊರೆ ಅವನನ್ನು ಆಮಂತ್ರಿಸಿದ. ಮುಸೊಲೀನಿ ನಾಟಕೀಯವಾಗಿ, ಫ್ಯಾಸಿಸ್ಟ್ ಪಕ್ಷದ ಮುಖಂಡನೆಂಬ ಜಯಘೋಷದ ನಡುವೆ ಅಧಿಕಾರ ವಹಿಸಿಕೊಂಡ, ಮುಂದೆ ಮೂರು ವರ್ಷಗಳವರೆಗೆ ಅವನು ತನ್ನ ಸ್ಥಿತಿಯನ್ನು ಭದ್ರಪಡಿಸಿಕೊಂಡು 1925ರ ಅನಂತರ ಇಟಲಿಯಲ್ಲಿ ಸರ್ವತಂತ್ರ ಏಕಾಧಿಪತ್ಯ ಸ್ಥಾಪಿಸಿದ. ಎಲ್ಲ ವಿರೋಧಿ ರಾಜಕೀಯ ಪಕ್ಷಗಳನ್ನೂ ತುಳಿದು ಇಟಲಿಯನ್ನು ಏಕಪಕ್ಷೀಯ ರಾಜ್ಯವೆಂದು ಘೋಷಿಸಿದ. ಮುಂದೆ ಅವನು ಇಟಲಿಯ ಏಕೈಕ ಮುಖಂಡನಾದ. ಏಕೈಕ ರಾಜಕೀಯ ಪಕ್ಷ ಫ್ಯಾಸಿಸ್ಟ್ ಪಕ್ಷ. ಏಕೈಕರಾಜ್ಯ ತತ್ವ ಫ್ಯಾಸಿಸಮ್. -

	ಫ್ಯಾಸಿಸಮ್ ಮೊದಲು ಒಂದು ವ್ಯವಸ್ಥಿತ ರಾಜ್ಯಸಿದ್ಧಾಂತವಾಗಿ ಬಂದಿರಲಿಲ್ಲ. ಇಟಲಿಯ ಐತಿಹಾಸಿಕ ಬೆಳವಣಿಗೆಯೇ ಫ್ಯಾಸಿಸಮ್ಮಿನ ರಾಜಕೀಯ ವಿಚಾರಸರಣಿಗೆ ತಳಹದಿಯೆಂದು ಹೇಳಬಹುದು. ಫ್ಯಾಸಿಸಮ್ ಉಗ್ರ ರಾಷ್ಟ್ರೀಯವಾದಿ ಸರ್ವತಂತ್ರ ಏಕಾಧಿಪತ್ಯವನ್ನು ಪ್ರತಿಪಾದಿಸುತ್ತದೆ. ದೇಶಕ್ಕೆ ಒಂದೇ ಪಕ್ಷ, ಒಬ್ಬನೇ ಮುಖಂಡ. ಫ್ಯಾಸಿಸಮ್ ವರ್ಗ ವಿಭಜನೆಯನ್ನಾಗಲಿ ವರ್ಗ ಹೋರಾಟವನ್ನಾಗಲಿ ನಂಬುವುದಿಲ್ಲ. ರಾಷ್ಟ್ರದ ಏಕತೆಯೇ ಸಮಾಜ ಮತ್ತು ರಾಷ್ಟ್ರರಚನೆಯ ಮೂಲ ಸಿದ್ಧಾಂತವೆಂದು ಇದು ಪರಿಗಣಿಸುತ್ತದೆ. ಈ ತತ್ತ್ವದಲ್ಲಿ ರಾಷ್ಟ್ರದ ಅಥವಾ ರಾಜ್ಯದ ಪೂಜೆ ಪರಮಾವಧಿಗೆ ಮುಟ್ಟಿತು. ರಾಜ್ಯಕ್ಕೆ ಮೇಲೆ, ರಾಜ್ಯಕ್ಕೆ ಹೊರಗೆ, ರಾಜ್ಯದ ಹೊರತು ಏನೂ ಇಲ್ಲ ಎಂದು ಮುಸೊಲೀನಿ ಸಾರಿದ. ರಾಜ್ಯದ ಹಿತವೇ ವ್ಯಕ್ತಿ ಹಾಗೂ ಸಮಾಜದ ಹಿತ. ಇದರ ಹಿತಕ್ಕಾಗಿ ಯಾವುದೇ ನೀತಿಯನ್ನಾದರೂ ಅನುಸರಿಸಬಹುದು. ಮೋಸ, ಯುದ್ಧ, ಕುತಂತ್ರ ಯಾವುದಾದರೂ ಸರಿಯೇ. ಇದರಲ್ಲಿ ತಪ್ಪು ಒಪ್ಪು ಎಂಬ ಪ್ರಶ್ನೆಯೇ ಇಲ್ಲ. ಅಷ್ಟೇ ಅಲ್ಲ, ಯುದ್ಧ ಹಿಂಸೆಗಳು ರಾಜ್ಯ ವಿಸ್ತಾರದ ಸಲುವಾಗಿ ಮಾತ್ರ ಅವಶ್ಯವಾಗಿರದೆ ಮಾನವನ ಆಧ್ಯಾತ್ಮಿಕ ಬೆಳವಣಿಗೆಗೂ ಅತ್ಯಗತ್ಯ. ಮಾನವನಲ್ಲಿ ಸಾಹಸ, ತ್ಯಾಗ ಮುಂತಾದ ಶ್ರೇಷ್ಠ ಗುಣಗಳು ಯುದ್ಧದಿಂದ ಸ್ಫುಟಗೊಂಡು ಉನ್ನತಮಟ್ಟ ಮುಟ್ಟುತ್ತವೆ. ಯುದ್ಧ ಫ್ಯಾಸಿಸ್ಟ್ ರಾಜ್ಯತತ್ತ್ವದ ಉಸಿರು. ರಾಜ್ಯವಿಸ್ತರಣೆಯೇ ಫ್ಯಾಸಿಸ್ಟ್ ತತ್ತ್ವದ ಪರಮಧ್ಯೇಯ. ಯುದ್ಧ ಇದಕ್ಕೆ ಸಾಧನ.

	ಫ್ಯಾಸಿಸಮ್ ಶಾಂತಿವಿರೋಧಿ ಮಾತ್ರವಲ್ಲ, ಪ್ರಜಾತಂತ್ರ ಮತ್ತು ಸಮಾಜವಾದಿ ಸಿದ್ಧಾಂತಗಳಿಗೂ ಕಡುವಿರೋಧಿ. ಇಟಲಿಯ ಮೇಲಣ ವರ್ಗದವರು ತಮ್ಮ ಹಿತರಕ್ಷಣೆಗಾಗಿ, ಫ್ಯಾಸಿಸ್ಟರ ಕೈಯಿಂದ ಪ್ರಜಾತಂತ್ರದ ಕೊಲೆಯಾಗುತ್ತಿದ್ದುದನ್ನು ನಿಸ್ಸಹಾಯಕರಾಗಿ ನೋಡಬೇಕಾಯಿತು.

	ಮಸೊಲೀನಿಯ ಸರ್ವಾಧಿಕಾರಿ ಪ್ರಭುತ್ವ ಇಟಲಿಯ ರಾಜಕೀಯ ಹಣೆಯಬರಹವನ್ನು ನಿರ್ಧರಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಮುಸೊಲೀನಿಯ ವಜ್ರಮುಷ್ಟಿಯ ಆಳ್ವಿಕೆಯಲ್ಲಿ ಇಟಲಿಯ ಆರ್ಥಿಕಸ್ಥಿತಿ ಸುಧಾರಿಸಿದ್ದು ನಿಜ. ತಮ್ಮ ರಾಷ್ಟ್ರದ ಬಗ್ಗೆ ಇಟಲಿಯ ಜನತೆಯಲ್ಲಿ ಹೆಮ್ಮೆ-ಅಭಿಮಾನಗಳು ಪುಟಿದೆದ್ದದ್ದೂ ನಿಜ. ಆದರೆ ಈ ಆರ್ಥಿಕ ಏಳಿಗೆ ಹಾಗೂ ರಾಷ್ಟ್ರಪ್ರತಿಷ್ಠೆಗಳು ತಾತ್ಕಾಲಿಕವಾಗಿದ್ದುವು. ಮೊದಮೊದಲು ಇಟಲಿಯ ದರ್ಪಕ್ಕೆ ಯೂರೊಪಿನ ರಾಷ್ಟ್ರಗಳು ಅಂಜಿದುವು. ಸರ್ವಾಧಿಕಾರದ ಅಹಂಕಾರದ ಉನ್ಮಾದದಿಂದ ಕೊಬ್ಬಿ ಹೋದ ಮುಸೊಲೀನಿ ಇತರರ ರಾಜ್ಯಗಳನ್ನು ಆಕ್ರಮಿಸಲು ಮುಂದಾದ. ಅಕ್ರಮಣಕಾರಿ ಹಾಗೂ ವಿಸ್ತರಣವಾದಿ ನೀತಿಯನ್ನನುಸರಿಸಿ 1933-34ರಲ್ಲಿ ಅಬಿಸೀನಿಯಾದ ಮೇಲೆ ದಾಳಿ ಮಾಡಿದ. ಅಂದು ಇದೂ ಒಂದು ಅಂತರಾಷ್ಟ್ರೀಯ ಕೋಲಾಹಲವಾಗಿ ಪರಿಣಮಿಸಿತು. ದೊಡ್ಡ ರಾಷ್ಟ್ರಗಳು ಮುಸೊಲೀನಿಯನ್ನು ತಡೆಗಟ್ಟಲು ಮುಂದೆ ಬರಲಿಲ್ಲ. ಚಿಕ್ಕ ರಾಷ್ಟ್ರಗಳು ಅವನಿಗೆ ಹೆದರಿದುವು. ಅಬಿಸೀನಿಯದ ಮೇಲೆ ಇಟಲಿ ನಡೆಸಿದ ಆಕ್ರಮಣವನ್ನು ರಾಷ್ಟ್ರಗಳ ಕೂಟ ಅನುಮೋದಿಸಲಿಲ್ಲ. ಆದರೆ ಮಹತ್ವಾಕಾಂಕ್ಷೆಯ ಮುಸೊಲೀನಿ ರಾಷ್ಟ್ರಗಳ ಕೂಟದ ಗೊತ್ತುವಳಿಗಳನ್ನು ತಿರಸ್ಕಾರದಿಂದ ಕಡೆಗಣಿಸಿದ.

	ಎರಡನೆಯ ಮಹಾಯುದ್ಧದ ಕಾಲದಲ್ಲಿ ಇಟಲಿ, ಜರ್ಮನಿ ಮತ್ತು ಜಪಾನುಗಳು ಒಂದಾಗಿ ಯುದ್ಧದಲ್ಲಿ ಧುಮುಕಿದುವು. ಜರ್ಮನಿ ಜಪಾನ್‍ಗಳಲ್ಲೂ ಫ್ಯಾಸಿಸಮ್ ಬೇರೂರಿತ್ತು. ಸ್ಪೇನಿನಲ್ಲೆ ಫ್ರಾಂಕೋನ ಪ್ರಭುತ್ವ, ಪೋರ್ಚುಗಲ್ಲಿನಲ್ಲಿ ಸಾಲಜಾರನ ಆಡಳಿತ ಇವೂ ಫ್ಯಾಸಿಸ್ಟ್ ಮಾದರಿಯವು. ಮುಸೊಲೀನಿ ಹಿಟ್ಲರನ ಸ್ನೇಹ ಗಾಢವಾಗಿ ಬೆಳೆಯಿತು. ಇವರ ಯುದ್ಧ ಸಿದ್ಧತೆಗಳಿಗೆ ಪ್ರಪಂಚವೇ ತಲ್ಲಣಿಸಿತು. ಈ ಸರ್ವಾಧಿಕಾರಿಗಳು ಜಗತ್ತನ್ನು ಯುದ್ಧಕ್ಕೆ ತಳ್ಳಿದರು. ಆದರೆ ಕೊನೆಗೆ ಇವರ ಯೋಜನೆಗಳು ಫಲಿಸಲಿಲ್ಲ. ಮುಸೊಲೀನಿ ಪತನ ಹೊಂದಿದ. ಇಟಲಿ ಅಪಾರ ನಷ್ಟಕ್ಕೀಡಾಯಿತು.

	ಆಕ್ರಮಣಕಾರೀ ರಾಷ್ಟ್ರೀಯತೆ, ಸರ್ವಾಧಿಕಾರಿ ನಾಯಕಪಂಥ, ಯುದ್ಧಪ್ರಿಯತೆ, ರಾಷ್ಟ್ರಸಂಸ್ಕøತಿಯ ಅಂಧಪೂಜೆ ಇವು ಫ್ಯಾಸಿಸಮ್ಮಿನ ಮುಖ್ಯ ಲಕ್ಷಣಗಳು. ಇದು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗಳಿಗೆ ವಿರೋಧಿ, ಪ್ರಜಾಸತ್ತೆಯ ಪರಮಶತ್ರು. ಇಲ್ಲಿ ಪ್ರಜೆಗಳು ಸರ್ಕಾರದ ಕೈಗೊಂಬೆಗಳಂತೆ. ಒಂದು ರಾಜ್ಯ ಆಂತರಿಕ ಬಿಕ್ಕಟ್ಟಿಗೆ ಸಿಕ್ಕಾಗ ಫ್ಯಾಸಿಸಮ್ ತಲೆ ಎತ್ತಬಹುದಾಗಿದೆ. ಎರಡನೆಯ ಮಹಾಯುದ್ಧದ ಅನಂತರವೂ ಫ್ಯಾಸಿಸ್ಟ್ ಪ್ರವೃತ್ತಿಗಳು ಅಲ್ಲಲ್ಲಿ ತಲೆ ಎತ್ತಿರುವುದುಂಟು. ಫ್ಯಾಸಿಸಮ್ ಪ್ರಾಬಲ್ಯದ ವಿರುದ್ಧ ಒಂದು ಭರವಸೆಯೆಂದರೆ ಇದು; ಪ್ರಜೆಗಳು ಶಾಶ್ವತವಾಗಿ ತಮ್ಮ ಸ್ವಾತಂತ್ರ್ಯದ ಅಪಹರಣವನ್ನು ಸಹಿಸುವುದಿಲ್ಲ. ಇದು ಇತಿಹಾಸ ಕಲಿಸಿರುವ ಪಾಠ.
(ಜಿ.ಕೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ